ನೆಲ್ಯಾಡಿ:ಹಿರಿಯ ಜೀವಗಳಿಗೆ  ಆಸರೆ ಕಲ್ಪಿಸಿದ ಸಮಾನ ಮನಸ್ಕರ ವೇದಿಕೆ

ನೆಲ್ಯಾಡಿ:ಹಿರಿಯ ಜೀವಗಳಿಗೆ  ಆಸರೆ ಕಲ್ಪಿಸಿದ ಸಮಾನ ಮನಸ್ಕರ ವೇದಿಕೆ

ಕಡಬ ಟೈಮ್ಸ್, ನೆಲ್ಯಾಡಿ:  ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ವೃದ್ಧ ದಂಪತಿಯ ಕುಸಿದು ಬಿದ್ದ ಮನೆಯನ್ನು ಮಾನವೀಯ ನೆಲೆಯಲ್ಲಿ ಪುನರ್ ನಿರ್ಮಾಣಗೊಳಿಸುವ ಮೂಲಕ ಸಾಮಾಜಿಕ ಸಂಘಟನೆಯ ಸಹಕಾರದೊಂದಿಗೆ  ಸಮಾನ ಮನಸ್ಕರ ವೇದಿಕೆ ಹಿರಿಯ ಜೀವಗಳಿಗೆ  ಆಸರೆ ಕಲ್ಪಿಸಿ ಮಾದರಿ ಕೆಲಸ ಮಾಡಿದೆ.

ಕೌಕ್ರಾಡಿ ದೋಂತಿಲದಲ್ಲಿ  ಬಾಬು ಆಚಾರ್ಯ ಮತ್ತು ಅವರ ಪತ್ನಿ ಸರೋಜರವರು ಗುಡಿಸಲಿನಲ್ಲಿ  ವಾಸವಾಗಿದ್ದರು. ಈ ದಂಪತಿಗೆ ದುಡಿದು ತಿನ್ನುವ ಇಬ್ಬರು ಮಕ್ಕಳಿದ್ದರೂ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು.  ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ಇವರ ಮನೆ ಕುಸಿದು ಬಿದ್ದು ಹಾನಿಗೊಂಡಿತ್ತು. ಹೀಗಾಗಿ  ಸಮೀಪದ ಕೃಷಿಕರೋರ್ವರ ಕೋಳಿ ಫಾರ್ಮ್ನ ಶೆಡ್ನಲ್ಲಿ ದಂಪತಿ ಕೆಲ ದಿನ ಕಳೆದರು.

ನೆಲ್ಯಾಡಿಯ ಜಿ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲುರವರ ಗಮನಕ್ಕೆ ಈ ವಿಚಾರ ಬಂದಾಗ  ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ರೆ.ಫಾ.ಡಾ| ವರ್ಗೀಸ್ ಕೈಪುನಡ್ಕರವರ ಗಮನಕ್ಕೆ ತಂದರು.  ಅವರು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚಿಸಿ ಕಾರ್ಯಕ್ಕೆ ಮುಂದಾದರು. ಈ ಕಾರ್ಯಕ್ಕೆ ಹೊಸಮಜಲು ಅಶ್ವತ್ಥ ಗೆಳೆಯರ ಬಳಗ ಹಾಗೂ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ನ ಎಸ್ಎಂವೈಎಂ ಸಂಘಟನೆಯವರೂ ಸಾಥ್ ನೀಡಿ ಸ್ವಯಂ ಸೇವಕರಾಗಿ ಶ್ರಮದಾನದಲ್ಲಿ ಪಾಲ್ಗೊಂಡರು. ಜೂ.೧ರಂದು ಪುನರ್ ನಿರ್ಮಾಣಗೊಂಡ ಮನೆಯ ಕೀ ಹಸ್ತಾಂತರ ಮಾಡಲಾಯಿತು.  ವೃದ್ಧ ದಂಪತಿಯ ಮನೆಯನ್ನು ಪುನರ್ನಿರ್ಮಾಣಗೊಳಿಸುವ ಮೂಲಕ ಸಂಘಟನೆಯವರ ಮಾದರಿ ಕೆಲಸಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

970×90