ಕಡಬ: ಗ್ರಾಮ ಮಟ್ಟದಲ್ಲಿ ಕೋವಿಡ್ ಕಂಟ್ರೋಲ್ ಮಾಡಲು ಪಿಡಿಒಗಳು ಆಕ್ಟಿವ್ ಆಗಿ- ಸಚಿವ ಎಸ್.ಅಂಗಾರ

ಕಡಬ: ಗ್ರಾಮ ಮಟ್ಟದಲ್ಲಿ ಕೋವಿಡ್ ಕಂಟ್ರೋಲ್ ಮಾಡಲು ಪಿಡಿಒಗಳು ಆಕ್ಟಿವ್ ಆಗಿ- ಸಚಿವ ಎಸ್.ಅಂಗಾರ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕೊರೋನಾ ಸೋಂಕಿತರನ್ನು ಇನ್ನು ಮುಂದೆ ಕಡ್ಡಾಯವಾಗಿ ಹೋಂ ಐಸೋಲೇಶನ್ ನಿಂದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು, ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿತರು ಮನೆಯಲ್ಲಿ ಇರಕೂಡದು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮೇ.29ರಂದು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕೋವಿಡ್ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ, ಈಗಾಗಲೇ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ತಳಮಟ್ಟದಲ್ಲಿ ಮನೆ ಮನೆ ಭೇಟಿ ಮೂಲಕ ಕೆಲಸ ನಿರ್ವಹಿಸುತ್ತಿದ್ದರೂ ಕೊರೋನಾ ನಿಯಂತ್ರಣ ಬರುತ್ತಿಲ್ಲ. ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯ ಇದ್ದು, ಈ ಹಿನ್ನಲೆಯಲ್ಲಿ ಇನ್ನು ಮುಂದೆ ಕೊರೋನಾ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕು, ಈ ಬಗ್ಗೆ ಅಧಿಕಾರಿಗಳು ತಳಮಟ್ಟದ ಕೊರೋನಾ ವಾರಿಯರ್ಸ್‌ ಗೆ ಮುತುವರ್ಜಿಯಿಂದ ವಹಿಸಿ ಸಹಕಾರ ನೀಡಬೇಕು.

ಅಧಿಕಾರಿಗಳು ಸುಮ್ಮನಿದ್ದರೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ಕೆಲಸವೂ ನಾಮಕವಸ್ಥೆಯಾಗುತ್ತದೆ. ಆದುದರಿಂದ ಎಲ್ಲ ಗ್ರಾಮಗಳಲ್ಲಿ ಕೋವಿಡ್ ಕಾರ್ಯಪಡೆ ಸಕ್ರೀಯವಾಗಬೇಕು, ಗ್ರಾ.ಪಂ. ಪಿಡಿಒಗಳು ಹೆಚ್ಚು ಕೆಲಸ ಮಾಡಬೇಕಿದೆ. ಸಾಮಾಜಿಕ ಅಂತರ, ಸರಕಾರದ ನಿಯಮಗಳನ್ನು ಪಾಲಿಸದೆ ಇರುವವರ ವಿರುದ್ದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು, ಕೊರೋನಾ ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ಬರಲು ಒಪ್ಪದಿದ್ದರೆ ಅಂತವರ ವಿರುದ್ದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಸಭೆಯಲ್ಲಿ ಕಡಬ ತಹಸೀಲ್ದಾರ್ ಅನಂತ ಶಂಕರ್, ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್, ಕಡಬ ಎಸ್.ಐ ರುಕ್ಮ ನಾಯ್ಕ್ ,ಉಪ ತಹಸೀಲ್ದಾರ್ ಮನೋಹರ್ ಕೆಟಿ, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ಸೇರಿದಂತೆ ಆಶಾಕಾರ್ಯಕರ್ತೆಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಕರಣಿಕರು ಮೊದಲಾದವರು ಉಪಸ್ಥಿತರಿದ್ದರು.

970×90