ಕಡಬದಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆ

ಕಡಬದಲ್ಲಿ ಕೋವಿಡ್  ಪ್ರಗತಿ ಪರಿಶೀಲನಾ ಸಭೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ:  ಕೋವಿಡ್ ಸ್ಥಿತಿಗತಿಯ ಕುರಿತು ಸುಳ್ಯ ಶಾಸಕ, ಸಚಿವರೂ ಆದ ಎಸ್.ಅಂಗಾರರವರ ಅಧ್ಯಕ್ಷತೆಯಲ್ಲಿ   ಕಡಬ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಒಗಳ ಜೊತೆ ಮೇ.3ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಕೋವಿಡ್  ಕುರಿತ ಪ್ರಗತಿ ಪರಿಶೀಲನಾ ಸಭೆ  ಸಭೆ ನಡೆಸಿದರು.

ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್‌ರವರು  ಸಭೆಗೆ ಮಾಹಿತಿ ನೀಡಿ ಕಡಬ ತಾಲೂಕಿನಲ್ಲಿ ೧೪೦ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ೩೪ ಮಂದಿ ಮನೆಯಲ್ಲಿ ಐಸೋಲೇಶನ್ ನಲ್ಲಿ ಇದ್ದು ೭ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಸಚಿವ ಎಸ್. ಅಂಗಾರ ಅವರು ಮಾತನಾಡಿ ಗ್ರಾಮಮಟ್ಟದಲ್ಲಿಯೇ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಗ್ರಾ.ಪಂ ನ ಟಾಸ್ಕ್ ಪೋರ್ಸ್ ಸಮಿತಿ ಅಗತ್ಯ ಸಭೆಗಳನ್ನು ಕರೆದು ನಿರ್ಧಾರ ಕೈಗೊಳ್ಳಬೇಕು.ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿಯ ಜೊತೆಗೆ ಎಚ್ಚರಿಕೆ ನೀಡಬೇಕು ಎಂದರಲ್ಲದೆ ಗ್ರಾಮದಲ್ಲಿ ಕೋವಿಡ್ ಸೋಂಕಿತರು ಸಾರ್ವಜನಿಕ ಸ್ಥಳದಲ್ಲಿ ತಿರುಗಾಡದಂತೆ ಎಚ್ಚರಿಕೆ ನೀಡಬೇಕು,ಪೊಲೀಸ್ ಇಲಾಖೆಯ ಸಹಕಾರ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಅಲ್ಲದೆ ಅಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಆಗದಂತೆ ಗಮನ ಹರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರಾಜಕೀಯ ಮುಖಂಡ ಕೃಷ್ಣ ಶೆಟ್ಟಿ ಮತ್ತು ಪುಲಸ್ತ್ಯ ರೈ ಅವರು ಕಡಬ ತಾಲೂಕಿಗೆ ಪ್ರಭಾರ ತಾಲೂಕು ವೈಧ್ಯಾಧಿಕಾರಿಯನ್ನು ನೇಮಿಸುವಂತೆ ಸಚಿವರ ಗಮನ ಸೆಳೆದರು. ಅಲ್ಲದೆ ಕೋವಿಡ್ ಲಸಿಕೆಯ ಬಗ್ಗೆ ಇರುವ ಜನರಲ್ಲಿರುವ ಸಂದೇಹಗಳನ್ನು ಬಗೆಹರಿಸುವಂತೆ ಅಧಿಕಾರಿಗಳ ಗಮನ ಸೆಳೆದರು.  ಕಡಬ ತಹಶೀಲ್ದಾರ್  ಮಾತನಾಡಿ ಸರ್ಕಾರದ ಮಾರ್ಗಸೂಚಿಯನ್ನು ಕ್ರಮಬದ್ದವಾಗಿ ಪಾಲಿಸುವಂತೆ ಸೂಚಿಸಿದರು.

 

‘ಕೋವಿಡ್ ಸೋಂಕಿತರ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನಹರಿಸದಿರುವುದನ್ನು  ಶಿರಾಡಿಯ ಘಟನೆಯೊಂದನ್ನು ಉಲ್ಲೇಖಿಸಿ ಕೃಷ್ಣ ಶೆಟ್ಟಿ ಅವರು  ವಿವರಿಸಿದರು.ಈ ವೇಳೆ ಅಲ್ಲಿನ ಅಧಿಕಾರಿಗಳಲ್ಲಿ ತಹಶೀಲ್ದಾರ್  ಮಾಹಿತಿ ಕೇಳಿದಾಗ  ಸೂಕ್ತ ಉತ್ತರವಿಲ್ಲದೆ ತಡವರಿಸಿದರು.ಕೋವಿಡ್ ನಿಯಂತ್ರಿಸುವಲ್ಲಿ ತಾಲೂಕು ಆಡಳಿತದ ವಿಫಲವಾಗಿರುವುದನ್ನು  ಪೂರಕ ಮಾಹಿತಿಯೊಂದಿಗೆ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಸಭೆಯಲ್ಲಿ ತಿಳಿಯಪಡಿಸಿದರು .ವಿವಿಧ  ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ,ಕೈಗೊಂಡ ಕ್ರಮಗಳ ತಹಶೀಲ್ದರ್  ಅವರನ್ನು ಕೇಳಿದಾಗ ಅಸಮರ್ಪಕ ಮಾಹಿತಿ ನೀಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಉತ್ತರಿಸಿದ ಕೃಷ್ಣ ಶೆಟ್ಟಿಯವರು   ಉಡಾಫೆ ಉತ್ತರ ನೀಡಬೇಡಿ ಇಂತಹ ಸಂಧಿಘ್ನ  ಪರಿಸ್ಥಿತಿಯಲ್ಲಿ ಅಗತ್ಯ ಮುಂಜಾಗೃತ ಕ್ರಮಗಳನ್ನು  ಕೈಗೊಂಡು ಸೋಂಕು ನಿಯಂತ್ರಿಸಲು  ಕ್ರಮ ಕೈಗೊಳ್ಳಿ  ಎಂದರು,

ಸಭೆಯಲ್ಲಿ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ತಾ.ಪಂ.ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ.ಕುಸುಮಾ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸೇರಿದಂತೆ  ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಒಗಳು, ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

970×90