ಕೃಷಿ ಕ್ಷೇತ್ರದ ಸಾಧಕ ಧರ್ಣಪ್ಪ ಗೌಡ ಕುಂಟ್ಯಾನ ನಿಧನ

ಕೃಷಿ ಕ್ಷೇತ್ರದ ಸಾಧಕ ಧರ್ಣಪ್ಪ ಗೌಡ ಕುಂಟ್ಯಾನ ನಿಧನ

 

ಪುತ್ತೂರು:ಕೃಷಿಯನ್ನು ನಂಬಿ ಪ್ರೀತಿಸಿ ಬೆಳೆಸಿ `ತರಕಾರಿ ಧರ್ಣಪ್ಪ ಗೌಡ’ ಎಂದೇ ಖ್ಯಾತರಾಗಿದ್ದ ಪ್ರಗತಿ ಪರ ಕೃಷಿಕ, ಕೊಡುಗೈ ದಾನಿ ಬನ್ನೂರು ಗ್ರಾಮದ ಕುಂಟ್ಯಾಣ ಧರ್ಣಪ್ಪ ಗೌಡ(೭೪.ವ) ಮಾ.೨೨ರಂದು ಸಂಜೆ ಚಾರ್ವಾಕದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

 


ಕೃಷಿ ಕ್ಷೇತ್ರದಲ್ಲಿ ಪರಿಣತರಾಗಿರುವ ಧರ್ಣಪ್ಪ ಗೌಡರವರು ಕಳೆದ ೫೦ ವರ್ಷಗಳಿಂದ ತರಕಾರಿ ಕೃಷಿಯಲ್ಲಿ ಪರಿಣಿತರು. ಚಾರ್ವಾಕ, ಸಂಪ್ಯ, ಮಾಡಾವುಗಳಲ್ಲಿ ಜಾಗವನ್ನು ಖರೀದಿಸಿ ತನ್ನ ಕೃಷಿ ಕ್ಷೇತ್ರದ ಸಾಧನೆಯನ್ನು ವಿಸ್ತರಿಸಿದ್ದರು. ಕೃಷಿ ಕ್ಷೇತ್ರದ ಮಹಾನ್ ಸಾಧಕರಾಗಿದ್ದ ಧರ್ಣಪ್ಪ ಗೌಡರವರಿಗೆ ಪ್ರಶಸ್ತಿಗಳೆ ಕೃಷಿ ಕಾಯಕಧಾರಿಯಾದ ಅವರನ್ನು ಹುಡುಕಿಕೊಂಡು ಬಂದಿವೆ. ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

`ಸುದ್ದಿ’ಯಿಂದ ಗೌರವಾರ್ಪಣೆ:
ಧರ್ಣಪ್ಪ ಗೌಡರವರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸುದ್ದಿ ಸೌಹಾರ್ದ ಸಹಕಾರಿ ಸಂಘ ಕಚೇರಿ ಸ್ಥಳಾಂತರಗೊಂಡು ಶುಭಾರಂಭದಲ್ಲಿ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.

 

ಎತ್ತಿನಗಾಡಿಯಲ್ಲಿ ವ್ಯಾಪಾರ:
ಹಣ್ಣಡಿಕೆ ವ್ಯಾಪಾರವನ್ನು ಆರಂಭಿಸಿದ ಮೊದಲಲ್ಲಿ ಅಡಿಕೆಯನ್ನು ತಲೆಹೊರೆಯಲ್ಲಿ ಹೊತ್ತು ಸುಧಾರಿಸುತ್ತಿದ್ದ ಗೌಡರು ಬಳಿಕ ಎತ್ತಿನಗಾಡಿಯೊಂದನ್ನು ಖರೀದಿಸಿ ಗೇರುಕಟ್ಟೆಯ ತನಕ ಸಂಚರಿಸಿ ವ್ಯಾಪಾರವನ್ನು ವೃದ್ಧಿಸಿಕೊಂಡರು. ಮುಂದಕ್ಕೆ ರಿಕ್ಷಾ ಟೆಂಪೋ ಒಂದನ್ನು ಖರೀದಿಸಿ ಅದರಲ್ಲಿ ತನ್ನ ವ್ಯಾಪಾರವನ್ನು ಹಿಗ್ಗಿಸಿದರು.

 

ಆರ್ಥಿಕ ತಜ್ಞ:
ಧರ್ಣಪ್ಪ ಗೌಡರೊಬ್ಬ ಸೂಕ್ಷ್ಮ ಸಂವೇದನೆಯ ಆರ್ಥಿಕ ತಜ್ಞ. ತನ್ನ ತರಕಾರಿ ವ್ಯಾಪಾರದಲ್ಲಿ ಉಳಿಕೆಯಾದ ಹಣವನ್ನು ಡಬ್ಬಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಉತ್ತಮ ಮೊತ್ತವೊಂದು ಸಂಗ್ರಹವಾದಾಗ ಅದನ್ನು ವಿನಿಯೋಗಿಸಿ ಭೂಮಿ ಇಲ್ಲವೆ ವಾಹನ ಕೊಳ್ಳುವಂತಹ ಬೃಹತ್ ಹೂಡಿಕೆ ಮಾಡುತ್ತಿದ್ದರು. ಕೃಷಿಭೂಮಿಯಲ್ಲಿ ಸುರಿದ ಬೆವರು ಆಸ್ತಿಯಾಗಿ ಪರಿವರ್ತನೆಯಾಗುತ್ತಿತ್ತು.

ಮೃತರು ಪತ್ನಿ ಚೆನ್ನಮ್ಮ, ಪುತ್ರ ಪ್ರವೀಣ್ ಕುಂಟ್ಯಾಣ, ಪುತ್ರಿ ಸುಚಿತ್ರಾ, ಸುಮಿತ್ರಾ ಅಳಿಯಂದಿರಾದ ರಾಧಾಕೃಷ್ಣ, ರವಿ, ಪುತ್ರಿ ಸುನೀತಾ, ಸೊಸೆ ಸವಿತಾ ಪ್ರವೀಣ್, ದಯಾನಂದ ಕುಂಟ್ಯಾಣ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ನಾಳೆ ( ಮಾ._23 ಕ್ಕೆ )ಅಂತ್ಯ ಸಂಸ್ಕಾರ;:

ಮೃತರ ಮೃತದೇಹದ ಅಂತಿಮ ದರ್ಶನಕ್ಕೆ ಬನ್ನೂರು ಕುಂಟ್ಯಾಣ ಮನೆಯಲ್ಲಿ ಬೆಳಿಗ್ಗೆ ೬ಗಂಟೆಯಿಂದ ೯ಗಂಟೆಯ ತನಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಬಳಿಕ ಮೃತ ದೇಹದ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

970×90