ಹೊಸಮಠ ಸೇತುವೆ ಸಮೀಪದ ರಸ್ತೆ ಉಬ್ಬುಗಳು  |ವಾಹನ ಸವಾರರ  ಪಾಲಿಗೆ ಮೃತ್ಯುಕೂಪ!

ಹೊಸಮಠ ಸೇತುವೆ ಸಮೀಪದ ರಸ್ತೆ ಉಬ್ಬುಗಳು  |ವಾಹನ ಸವಾರರ  ಪಾಲಿಗೆ ಮೃತ್ಯುಕೂಪ!

ಕಡಬ ಟೈಮ್ಸ್, ಪಟ್ಟಣ ಸುದ್ದಿ-ನಾಗರಾಜ್ ಎನ್.ಕೆ :ಉಪ್ಪಿನಂಗಡಿ-ಕಡಬ ರಾಜ್ಯರಸ್ತೆಯ ಹೊಸಮಠ ನೂತನ ಸೇತುವೆಯ ಪಕ್ಕ  ಅವೈಜ್ಞಾನಿಕವಾಗಿ  ನಿರ್ಮಿಸಲಾಗಿರುವ ರಸ್ತೆ ಉಬ್ಬು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ.

ಒಂದುವರೆ ವರ್ಷದ ಹಿಂದೆ  ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ಕಾರಣಕ್ಕಾಗಿ ಹಂಪ್‌ಗಳನ್ನು ನಿರ್ಮಿಸಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿತ್ತು.  ಆದರೆ ಈಗ ಹಂಪ್‌ಗಳೇ ಅಪಘಾತಕ್ಕೆ ಕಾರಣವಾಗುತ್ತಿವೆ. ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರ ಘನವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗದೆ ಅಪಘಾತಗಳಾಗುತ್ತಿವೆ.

ಅವೈಜ್ಞಾನಿಕ ಹಂಪ್‌ಗೆ ಈಗಾಗಲೇ ಎರಡು ಜೀವ ಬಲಿಯಾಗಿದೆ. ಕೆಲ ತಿಂಗಳ ಹಿಂದೆ ತಮಿಳುನಾಡು ಮೂಲದ  ಕಾರ್ಮಿಕ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ  ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಹಲವು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ರವಿವಾರ (ಫೆ.28) ಬೈಕ್ ಸ್ಕಿಡ್ ಆಗಿ ಬೈಕ್‌ನಲ್ಲಿ ಹಿಂಬದಿ ಸವಾರೆ  ವೇಣೂರಿನ ಮಹಿಳೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಇನ್ನೊಂದು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕ 2 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ನಡೆಯಲೂ ಸಾಧ್ಯವಾಗದೇ ಮನೆಯಲ್ಲಿ ವಿಶ್ರಾಂತಿ ಪಡೆಯುವಂತಾಗಿದೆ.  ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಸಮಠದ ಅಪಾಯಕಾರಿ ಹಂಪ್‌ಗಳನ್ನು ಕೂಡಲೇ ತೆರವುಗೊಳಿಸಬೇಕು,ಇಲ್ಲವೇ ಅಪಘಾತಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ  ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಪ್ರತಿಕ್ರಿಯೆ ನೀಡಿ,  ಸೇತುವೆಯ ಬಳಿ ನಿರ್ಮಿಸಲಾಗಿರುವ ಹಂಪ್‌ಗಳಿಂದಾಗಿ ಅಪಘಾತಗಳು ನಡೆಯುತ್ತಿರುವ  ಹಿನ್ನೆಲೆಯಲ್ಲಿ ಪೊಲೀಸ್, ಆರ್‌ಟಿಒ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಉನ್ನತಾಧಿಕಾರಿಗಳ ಸೂಚನೆಯಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

 

970×90