ಕಡಬ ಟೈಮ್ಸ್: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಚಾಕು ತೋರಿಸಿ ಚಿನ್ನಾಭರಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಘಟನೆ ನಡೆದ 6 ಗಂಟೆಗಳಲ್ಲೇ ಹಿಡಿದು ಕೊಡಗು ಜಿಲ್ಲಾ ಪೊಲೀಸರು ಲಾಕಪ್ ಗೆ ತಳ್ಳಿದ್ದಾರೆ.
ಚೇರಂಬಾಣೆ ನಿವಾಸಿ ಸುದರ್ಶನ್(24) ಬಂಧಿತ ಆರೋಪಿ.
ಆಗಸ್ಟ್ 22ರಂದು ಹಗಲು ವೇಳೆಯಲ್ಲಿ ಮಡಿಕೇರಿಯ ಚೇರಂಬಾಣೆ ನಿವಾಸಿ ಕೆ.ಕೆ. ಗೋಪಾಲಕೃಷ್ಣ ಎಂಬವರ ಮನೆಯಲ್ಲಿ ಅವರ ತಾಯಿ ಒಬ್ಬರೇ ಇದ್ದ ಸಂದರ್ಭ ಮನೆಗೆ ನುಗ್ಗಿದ ಆರೋಪಿ, ಚಾಕು ತೋರಿಸಿ ಅವರನ್ನು ಬೆದರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗಿದ್ದ.
ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಸಣ್ಣಪುಲಿಕೋಟು ಬಸ್ ತಂಗುದಾಣ ಬಳಿ ಆರೋಪಿ ಸುದರ್ಶನ್‌ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 60 ಗ್ರಾಂ 530 ಮಿಲಿ ಚಿನ್ನಾಭರಣ, 620 ರೂ. ನಗದು, ಕೃತ್ಯಕ್ಕೆ ಬಳಸಿದ ಡ್ರಾಗರ್ ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಐ. ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‌ಐ ಶೋಭಾ ಲಮಾಣಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.