ಕಡಬ ಟೈಮ್ಸ್, ರಾಮಕುಂಜ:
ಕಳೆದ ನಾಲ್ಕೈದು ವರ್ಷಗಳಿಂದ ಖಾಲಿ ಇರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ
ಆ.5ರಂದು ಗ್ರಾ.ಪಂ.ಅಧ್ಯಕ್ಷೆ ಸುಚೇತಾ
ಬರೆಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆದಿದೆ.
ಉಪ್ಪಿನಂಗಡಿ
ವಲಯಾರಣ್ಯಾಧಿಕಾರಿ ಜಯಪ್ರಕಾಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆರೋಗ್ಯ
ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡುತ್ತಿದ್ದ ವೇಳೆ ವಿಷಯ ಪ್ರಸ್ತಾಪಿಸಿದ ಎಸ್.ಕೆ.ಸಿದ್ದೀಕ್ ಅವರು,
ಕಳೆದ ನಾಲ್ಕೈದು ವರ್ಷಗಳಿಂದ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಹೇಳಿದರು.
ಇದಕ್ಕೆ
ಪೂರಕವಾಗಿ ಮಾತನಾಡಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಗ್ರಾಮಸ್ಥರೂ ಆದ ಧರ್ಮಪಾಲ ರಾವ್
ಅವರು, ಆತೂರಿನಲ್ಲಿರುವ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯವಸ್ಥಿತವಾದ ಕಟ್ಟಡವಿದೆ. 7 ಗ್ರಾಮಗಳ
ವ್ಯಾಪ್ತಿಯೂ ಇದೆ. ಆದರೆ ವೈದ್ಯರಿಲ್ಲದೇ ಗ್ರಾಮಸ್ಥರು ತೊಂದರೆ ಪಡುವಂತೆ ಆಗಿದೆ ಎಂದರು. ಇದಕ್ಕೆ ಲಕ್ಷ್ಮೀ ನಾರಾಯಣ ರಾವ್ ಆತೂರು, ಚಿತ್ತರಂಜನ್ ಬದೆಂಜ ಸಹಿತ ಹಲವು ಗ್ರಾಮಸ್ಥರು ಬೆಂಬಲ ಸೂಚಿಸಿ ಖಾಯಂ ವೈದ್ಯಾಧಿಕಾರಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಈ
ವೇಳೆ ಮಾತನಾಡಿದ ಸದಸ್ಯ ಯತೀಶ್ ಬಾನಡ್ಕ ಅವರು, ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಸಚಿವರಿಗೆ ಮೂರು ಸಲ ಮನವಿ ಮಾಡಲಾಗಿದೆ.
ಡಿಹೆಚ್ಒ, ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಿ
ವೈದ್ಯರ ನೇಮಕ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ಈ ಬಗ್ಗೆ ಚರ್ಚೆ
ನಡೆದು ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವೈದ್ಯಾಧಿಕಾರಿ ನೇಮಕ ಆಗದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.