ಕಡಬ:
ಎಡಮಂಗಲ ಪೇಟೆಯಿಂದ ಪುಚ್ಚಾಜೆ–ಪರ್ಲ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸಂಚಾರ ಬಿಡಿ ನಡೆದು ಹೋಗಲೂ ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.
ಈ
ಕಚ್ಛಾ ರಸ್ತೆಯ ಬದಿಯಲ್ಲಿ ಮಳೆನೀರು ಹರಿದುಹೋಗಲು ಚರಂಡಿಗಳಿಲ್ಲದೇ ಇರುವುದರಿಂದಾಗಿ ರಸ್ತೆಯಲ್ಲಿಯೇ ಮಳೆನೀರು ಹರಿದು ರಸ್ತೆಯ ಮಣ್ಣು ಕೊಚ್ಚಿಕೊಂಡು ಹೋಗಿ ಈ ರಸ್ತೆಯಲ್ಲಿ ದಿನನಿತ್ಯ
ಸಂಚರಿಸುವ ವಾಹನ ಸವಾರರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸುಮಾರು
50 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 20 ಮನೆಯವರು ಹಾಗೂ ಇತರ ಜನರು ಈ ರಸ್ತೆಯನ್ನು ಉಪಯೋಗಿಸುತ್ತಿದ್ದರೂ
ರಸ್ತೆಯನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯ ಜನರ ಆರೋಪವಾಗಿದೆ.
ರಸ್ತೆಯ
ದುರವಸ್ಥೆಯ ಕುರಿತು ಕ್ಷೇತ್ರದ ಶಾಸಕರು ಹಾಗೂ ಗ್ರಾ.ಪಂ. ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುವ ಸ್ಥಳೀಯರು ಶೀಘ್ರ ಸಂಬಂಧಪಟ್ಟವರು ಸ್ಥಳೀಯ ಜನರ ಬೇಡಿಕೆಯನ್ನು ಈಡೇರಿಸಿ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸಬೇಕು ಎಂದು ಆಗ್ರಹಿಸಿದ್ದಾರೆ.