ಕಡಬ ಟೈಮ್ಸ್: ಟಿಕೆಟ್ ವಿಚಾರದಲ್ಲಿ ತಗಾದೆ ತೆಗೆದ ಪ್ರಯಾಣಿಕನೋರ್ವ ಕರ್ತವ್ಯನಿರತ ಬಸ್ ಕಂಡಕ್ಟರ್ ಗೆ ಹೊಡೆದು ಬಸ್ಸಿನಲ್ಲಿ ರಂಪಾಟ ನಡೆಸಿದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ಬಸ್ ನಲ್ಲಿ ಮಂಗಳವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಬಸ್ಸಿನಲ್ಲಿ ವಿಪರೀತ ಪ್ರಯಾಣಿಕರು, ಶಾಲಾ ಮಕ್ಕಳು ತುಂಬಿ ತುಳುಕುತ್ತಿದ್ದು ಕೆಮ್ಮಾರ ಬಳಿ ತಲುಪುತ್ತಿದ್ದಂತೆ ಪ್ರಯಾಣಿಕನೋರ್ವನಲ್ಲಿ ಕಂಡಕ್ಟರ್ ಟಿಕೇಟ್ ಕೇಳಿದ್ದ ಎನ್ನಲಾಗಿದೆ. ಬಳಿಕ ಈತ ಚಿಲ್ಲರೆ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.
ಆತೂರಿನ ಪ್ರಯಾಣಿಕ ರಂಪಾಟ ನಡೆಸಿ ಬಸ್ ಕಿಟಕಿಯನ್ನು ಹಾನಿಗೈದಿದಲ್ಲದೆ ಬಸ್ಟ್ ಕಂಡೆಕ್ಟರ್ ರಫಿಕ್ ಎಂಬವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು ಪೊಲೀಸರು ಆತನಿಗೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಪ್ರಯಾಣಿಕನ ಅವಾಂತರದಿಂದ ಹಲವು ಪ್ರಯಾಣಿಕರು ಮತ್ತು ಶಾಲಾ ಮಕ್ಕಳಿಗೆ ಕಿರಿಕ್ ಉಂಟಾಗಿತ್ತು.