Home ಪ್ರಮುಖ ಸುದ್ದಿ ನಿಫಾ ವೈರಸ್ ಸೋಂಕಿತ ವ್ಯಕ್ತಿಯ ಆರೈಕೆ ಮಾಡಿದ ಕಡಬದ ನರ್ಸ್ ಗೆ ಕೇರಳದಲ್ಲಿ ಆಪತ್ತು

ನಿಫಾ ವೈರಸ್ ಸೋಂಕಿತ ವ್ಯಕ್ತಿಯ ಆರೈಕೆ ಮಾಡಿದ ಕಡಬದ ನರ್ಸ್ ಗೆ ಕೇರಳದಲ್ಲಿ ಆಪತ್ತು

1
0
ಕಡಬ: ನಿಫಾ ವೈರಸ್ ಸೋಂಕಿಗೆ ತುತ್ತಾದ ರೋಗಿಗೆ ಆರೈಕೆ ಮಾಡಿದ್ದ ಕಡಬದ ಪುರುಷ ನರ್ಸ್​ಗೆ ಕೇರಳದಲ್ಲಿ  ನಿಫಾ ಸೋಂಕು ತಗಲಿತ್ತು. ನಂತರ ಅನಾರೋಗ್ಯಕ್ಕೀಡಾಗಿ   ಕೋಮಾ ಸ್ಥಿತಿಗೆ ತಲುಪಿರುವ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬುವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ನರ್ಸ್
 ಬಿಎಸ್ಸಿ ನರ್ಸಿಂಗ್ ಪದವೀಧರರಾಗಿದ್ದ ಇವರು ಕೇರಳದ ಕ್ಯಾಲಿಕಟ್​​ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್​​ನಲ್ಲಿ 2023ರಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿರುವಾಗಲೇ 2023 ಸೆಪ್ಟೆಂಬರ್ ತಿಂಗಳಲ್ಲಿ ಇವರು ನಿಫಾ ವೈರಸ್ ಹೊಂದಿದ್ದ ರೋಗಿಯೊಬ್ಬರ ಆರೈಕೆ ಮಾಡಿದ್ದರು. ಆ ಬಳಿಕ ಕ್ವಾರಂಟೈನ್​​​ನಲ್ಲಿದ್ದ ಟಿಟ್ಟೋ ತೋಮಸ್​ಗೆ ಎರಡು ತಿಂಗಳು ಕಳೆದ ನಂತರ ವಿಪರೀತ ತಲೆನೋವು ಕಾಣಿಸಿಕೊಂಡಿತ್ತು. 
ಡಿಸೆಂಬರ್​​​ನಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ಮೆದುಳಿನ ಸ್ಟ್ರೋಕ್‌ಗೆ ತುತ್ತಾಗಿರುವುದು ತಿಳಿದು ಬಂದಿದ್ದು, ಮರುದಿನವೇ ಟಿಟ್ಟೋ ಕೋಮಾಗೆ ಜಾರಿದರು ಎನ್ನಲಾಗಿದೆ.
 ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದಲೇ ಚಿಕಿತ್ಸೆ ನೀಡಿದ್ದರೂ, ಯಾವುದೇ ಫಲ ಕಂಡಿಲ್ಲ. ಆಡಳಿತ ಮಂಡಳಿ ಈಗಾಗಲೇ 40 ಲಕ್ಷ ರೂ.ಗಳಷ್ಟು ಖರ್ಚು ಸಹ ಭರಿಸಿದೆ ಎಂಬ ಮಾಹಿತಿ ಲಭಿಸಿದೆ.
 ಉನ್ನತ ಮಟ್ಟದ ಆಸ್ಪತ್ರೆಗೆ ದಾಖಲಿಸಿ ಮಗನಿಗೆ ಚಿಕಿತ್ಸೆ ನೀಡುವಂತೆ ಕೇರಳ ಸರ್ಕಾರದ ಗಮನಕ್ಕೆ ತರಲಾಗಿದೆ.ಈ ನಡುವೆ   ಮಲಯಾಳಿ ಅಸೋಸಿಯೇಷನ್ ಕಡಬ ಘಟಕದ ಮೂಲಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರ ಮೂಲಕ ಕರ್ನಾಟಕ ಸರ್ಕಾರದ ಗಮನಕ್ಕೂ ತರಲಾಗಿದೆ” ಎಂದು ತೋಮಸ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ನಿಫಾ ಸೋಂಕಿನಿಂದ ತತ್ತರಿಸಿರುವ ಟಿಟ್ಟೋನ ಪ್ರಾಣ ಉಳಿಸುವ ಸಲುವಾಗಿ ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕಳೆದ ಎಂಟು ತಿಂಗಳಿನಿಂದ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಅಲೆದಾಡುವುದೇ ದೈನಂದಿನ ಕಾಯಕವಾಗಿದೆ. 
ಈ ಬಗ್ಗೆ ಮಾದ್ಯಮವೊಂದಕ್ಕೆ  ಮಾತನಾಡಿದ ಟಿಟ್ಟೋ ಸಹೋದರ ಶಿಜೋ ಜಾಯ್, ”ಕಳೆದ ಎಂಟು ತಿಂಗಳ ಹಿಂದೆ ಕೋಮಾವಸ್ಥೆಗೆ ಜಾರಿದ ತಮ್ಮನ ಆರೋಗ್ಯ ಇಂದಲ್ಲ, ನಾಳೆ ಸರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಇಷ್ಟು ಸಮಯ ನಾವು ಕಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕೇರಳ ಸರ್ಕಾರದ ಗಮನಕ್ಕೆ ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ನಿಲ್ಲಬೇಕಾದ ಅನಿವಾರ್ಯತೆಯಿಂದ ನಾನೀಗ ಮಾಡುತ್ತಿದ್ದ ಕೆಲಸಕ್ಕೂ ರಾಜೀನಾಮೆ ನೀಡಿ ಆಸ್ಪತ್ರೆಯಲ್ಲೇ ಉಳಿಯುವಂತಾಗಿದೆ. ಮನೆಯವರೂ ಇಲ್ಲೇ ಇರೋದರಿಂದ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ.  ಕೇರಳ ಸರ್ಕಾರ ಉನ್ನತ ಮಟ್ಟದ ಚಿಕಿತ್ಸೆ ನೆರವಾದರೆ ನನ್ನ ಸಹೋದರನ ಪ್ರಾಣ ಉಳಿಸಬಹುದಾಗಿದೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here