ಕಡಬ ಟೈಮ್ಸ್(KADABA TIMES): ಬಿಸಿಲೆ ಘಾಟ್ ನ ರಸ್ತೆಯ ಬದಿ ಇರುವ ನದಿಯ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಿಸದೆ ಸಾವನ್ನೊಪ್ಪಿದ ಘಟನೆ ವರ್ದಿಯಾಗಿದೆ.
ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ತಂಡದ ಸದಸ್ಯರು ಆಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ತೆರಳಿದ್ದು ಸುಮಾರು 60-70 ಆಸುಪಾಸಿನ ವ್ಯಕ್ತಿಯೊಬ್ಬರು ಸಂಪೂರ್ಣ ನಗ್ನವಾಗಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಕೂಡಲೇ ಆ ವ್ಯಕ್ತಿಯನ್ನು ಸುಬ್ರಮಣ್ಯ ಸರಕಾರಿ ಆಸ್ಪತೆಗೆ ಕರೆತಂದು, ಬಳಿಕ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಈ ವೇಳೆ ದಾರಿ ಮಧ್ಯೆಯೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮೃತ ವ್ಯಕ್ತಿಯ ಬಾಯಿಂದ ನೊರೆ ಬರುತ್ತಿದ್ದು ಕೀಟನಾಶಕದ ವಾಸನೆ ಬರುತ್ತಿರುವುದರಿಂದ ಮೇಲ್ನೋಟಕ್ಕೆ ಈತ ಕೀಟನಾಶಕ ಕುಡಿದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸುಬ್ರಮಣ್ಯ ಪೊಲೀಸರು ಮತ್ತು ಎಸಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಯುವ ತೇಜಸ್ಸು ಟ್ರಸ್ಟ್ ನ ಸದಸ್ಯರಾದ ಗುರುಪ್ರಸಾದ್ ಪಂಜ, ನಿತಿನ್ ಭಟ್ ನೂಚಿಲ, ಉಜ್ವಲ್ ಕಾಜ್ಜೋಡಿ, ಹಿತೇಶ್ ಮಾಣಿಬೈಲ್ ಜೊತೆಗಿದ್ದರು ಹಾಗೂ ರಿಕ್ಷಾಚಾಲಕರಾದ ದೇವಿಪ್ರಸಾದ್ ಕುಲ್ಕುಂದ ಮತ್ತು ವಸಂತ ಕಲ್ಲಾಜೆ ಯುವತೇಜಸ್ಸು ತಂಡದೊಂದಿಗೆ ಸಹಕರಿಸಿದ್ದಾರೆ.