ಕಡಬ ಟೈಮ್ಸ್(KADABA TIMES):ನೆಲ್ಯಾಡಿ:ಕಾಪಿನಬಾಗಿಲು ಎಂಬಲ್ಲಿ ಮನೆ ನಿವೇಶನಕ್ಕೆ ಹಂಚಿಕೆಯಾಗಿರುವ ಜಾಗದ ಗಡಿ ಗುರುತು ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಕೌಕ್ರಾಡಿ ಗ್ರಾ.ಪಂ. ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ವನಿತಾ ಎಂ.,ರವರ ಅಧ್ಯಕ್ಷತೆಯಲ್ಲಿ ಜ.21ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿಯವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಕಾಪಿನಬಾಗಿಲು ಎಂಬಲ್ಲಿ ಒಂದೂವರೇ ಎಕ್ರೆ ಸರಕಾರಿ ಜಾಗ ಗ್ರಾಮ ಪಂಚಾಯತ್‌ಗೆ ಕಾಯ್ದಿರಿಸಿ ಮನೆ ಸೈಟ್ ಸಹ ಹಂಚಿಕೆ ಮಾಡಲಾಗಿದೆ. ಆದರೆ ಆ ಜಾಗ ಕೆಸಿಡಿಸಿಯವರ ಸ್ವಾಧೀನದಲ್ಲಿದ್ದು ಅವರಿಗೆ ಆರ್‌ಟಿಸಿಯೂ ಆಗಿದೆ. ಆದ್ದರಿಂದ ಈ ಜಾಗದ ಗೊಂದಲ ನಿವಾರಿಸಿಕೊಡಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿ ಸಿದ್ಧಲಿಂಗಪ್ಪರವರು, ಸದ್ರಿ ಜಾಗದ ಅಳತೆ ಮಾಡಿ ಪಂಚಾಯತ್‌ಗೆ ಹಸ್ತಾಂತರ ಆಗಿದೆ ಎಂದರು. ಆದರೆ ಅಲ್ಲಿ ಈಗ ಜಾಗದ ಸಮಸ್ಯೆ ಉಂಟಾಗಿದೆ. ಆದ್ದರಿಂದ ಜಾಗದ ಗಡಿ ಗುರುತು ಮಾಡಿಕೊಡಬೇಕೆಂದು ಸದಸ್ಯ ಮಹೇಶ್ ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಜಾಗ ಗಡಿ ಗುರುತು ಮಾಡಿಕೊಡುವುದಾಗಿ ಗ್ರಾಮಕರಣಿಕರು ತಿಳಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.