ಕಾಲನಿ ರಸ್ತೆ ಅಭಿವೃದ್ದಿಗೆ ಶಾಸಕರು ಗ್ರೀನ್ ಸಿಗ್ನಲ್ ಕೊಟ್ಟರೂ ಲೋಕಲ್ ಲೀಡರ್ ಬಿಡುತ್ತಿಲ್ಲ!
ಕಡಬ ಟೈಮ್ಸ್, ಕುಂತೂರು: ಪೆರಾಬೆ ಗ್ರಾ.ಪಂ ವ್ಯಾಪ್ತಿಯ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತುಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲನಿಗೆ ರಸ್ತೆಗೆ ಬಿಡುಗಡೆಗೊಂಡ ಅನುದಾನವನ್ನು ಬೇರೆ ಕಡೆ ಬಳಸಲು ಪ್ಲಾನ್ ಮಾಡಿrರುವ ಅನುಮಾನದ ಮೇರೆಗೆ ಮಂಗಳವಾರ ಕಾಮಗಾರಿ ಆರಂಭಿಸಲು ಬಂದ ಜೆಸಿಬಿಯನ್ನು ಕಾಲನಿ ನಿವಾಸಿಗಳು ಅಡ್ಡಗಟ್ಟಿ ವಾಪಾಸು ಕಳುಹಿಸಿದ ಘಟನೆ ನಡೆದಿದೆ.
ಈ ಹಿಂದೆಯೇ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಕೆಲ ಗ್ರಾಮಸ್ಥರು ಒಟ್ಟು ಸೇರಿ ಕಾಲನಿ ರಸ್ತೆಯಲ್ಲಿ ನಡೆಯಬೇಕಿದ್ದ ಗುದ್ದಲಿ ಪೂಜೆಯನ್ನು ಬೇರೆ ಕಡೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದರು. ಇದನ್ನರಿತ ಕಾಲನಿ ನಿವಾಸಿಗಳು ಗುದ್ದಲಿಪೂಜೆಯನ್ನು ಕಾಲನಿ ರಸ್ತೆಯಲ್ಲೇ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಬಳಿಕ ಗುದ್ದಲಿ ಪೂಜೆಗೆ ಬಂದವರು ಬೇರೆ ದಾರಿ ಕಾಣದೆ ಮನೆ ದಾರಿ ಹಿಡಿದಿದ್ದರು.
ಕೆಲ ತಿಂಗಳ ಬಳಿಕ ಸುಳ್ಯ ಶಾಸಕ. ಎಸ್. ಅಂಗಾರರವರು ಖುದ್ದಾಗಿ ಬಂದು ಕಾಲನಿ ರಸ್ತೆಯಲ್ಲಿ ಗುದ್ದಲಿ ಪೂಜೆ ನಡೆಸಿದ್ದರು . ಅಲ್ಲದೆ ಕಾಲದ ಕಾಲನಿ ನಿವಾಸಿಗಳ ಬೇಡಿಕೆ ಈಡೇರಲಿದೆ ಎಂದು ಕಾಲನಿ ನಿವಾಸಿಗಳಲ್ಲಿ ವಿಶ್ವಾಸ ತುಂಬಿದ್ದರು. ಇದೀಗ ಶಾಸಕರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಂಡ 80 ಲಕ್ಷ ರೂ ಅನುದಾನದಲ್ಲಿ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತುಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲನಿಗೆ ರಸ್ತೆಯನ್ನು ಅಭಿವೃದ್ದಿ ಮಾಡುವುದನ್ನು ಬಿಟ್ಟು ಮುಖ್ಯ ರಸ್ತೆಯಿಂದಲೇ ಕಾಮಗಾರಿ ಆರಂಭಿಸುವ ಯೋಜನೆ ರೂಪಿಸಿರುವುದು ತಿಳಿದು ಬಂದಿದ್ದು ಕಾಮಗಾರಿ ಆರಂಭಿಸಲು ಬಂದ ಜೆಸಿಬಿಯನ್ನು ಕಾಲನಿ ನಿವಾಸಿಗಳು ತಡೆಹಿಡಿದು ವಾಪಾಸು ಕಳುಹಿಸಿದ್ದಾರೆ . ಶಾಸಕರೇ ಕಾಲನಿ ರಸ್ತೆ ಅಭಿವೃದ್ದಿಗೆ ಗ್ರೀನ್ ಸಿಗ್ನಲ್ ಕೊಟ್ಟರೂ ತಮ್ಮ ಸ್ವ ಪಕ್ಷದ ಕೆಲ ಕಾರ್ಯಕರತರೇ ಅಡ್ಡಗಾಲು ಹಾಕುತ್ತಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ.