ಒಂದು ವರ್ಷದಿಂದ ತುಕ್ಕು ಹಿಡಿಯುತ್ತಿರುವ ಲಕ್ಷ ರೂ ಮೌಲ್ಯದ ಉಪಕರಣಗಳು
ಕಡಬ ಟೈಮ್ಸ್, ಪಟ್ಟಣ ಸುದ್ದಿ: ಇಲ್ಲಿಯ ಪೇಟೆಯ ಮಧ್ಯಭಾಗದಲ್ಲಿರುವ ಅಂಚೆ ಕಚೇರಿಯ ಎದುರು ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು ನೀರು ಬಾರದೆ ನಿರಾಸೆಗೊಂಡ ಸಾರ್ವಜನಿಕರು ಗುತ್ತಿಗೆದಾರರಿಗೆ ಮತ್ತು ಇಲ್ಲಿನ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ವಿಪರ್ಯಾಸವೆಂದರೆ ಡಿಸಿ.ಎಸಿ ,ಸಿಇಒ,ಇಒ ಸೇರಿದಂತೆ ಹಲವು ಅಧಿಕಾರಿಗಳು ವರ್ಗಾವಣೆಗೊಂಡು ಹೊಸ ಅಧಿಕಾರಿಗಳು ಬಂದರೂ ಕುಡಿಯುವ ನೀರಿನ ಘಟಕ ಬದಲಾಗಲಿಲ್ಲ!
ರಾಜ್ಯ ಸರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಸಾವಿರಾರು ಕೋಟಿ ರೂ ಖರ್ಚು ಮಾಡುತ್ತಿದ್ದು ಕಡಬ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಕಡೆಗಳಲ್ಲಿ ಈ ಯೋಜನೆಯ ಗುತ್ತಿಗೆಯನ್ನು ಕೆಆರ್‌ಡಿಸಿಎಲ್‌ನವರಿಗೆ ನೀಡಿದ್ದು ಗುತ್ತಿಗೆದಾರರ ಬೇಜಾವಬ್ದಾರಿಯಿಂದ ಅಲ್ಲಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಘಟಕ ಕಳಪೆ ಕಾಮಗಾರಿಯಿಂದ ದೂಳು ತಿನ್ನುತ್ತಿದೆ.ಕಡಬದ ಪೇಟೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ 8ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಒಂದೇ ದಿನದಲ್ಲಿ ಕೆಆರ್‌ಡಿಸಿಎಲ್ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದ್ದಾರೆ.
ಇನ್ನೇನು ನಮಗೆ 2 ರೂ.ಗೆ 20ಲೀ ಶುದ್ದ ಕುಡಿಯುವ ನೀರು ಲಭಿಸುತ್ತದೆ ಎಂದು ಪೇಟೆಯ ವ್ಯಾಪಾರಸ್ಥರು , ಸಂತೆ ವ್ಯಾಪಾರಿಗಳು, ಸುತ್ತಮುತ್ತಲಿನ ಮನೆಯವರು,ಆಸೆ ಪಟ್ಟದ್ದೇ ಬಂತು. ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ನಡೆಸಿ ಒಂದೇ ದಿನದಲ್ಲಿ ಈ ಶುದ್ದ ಕುಡಿಯುವ ನೀರಿನ ಯೋಜನೆ ಘಟಕವನ್ನು ನಿರ್ಮಿಸಿ ಜನರ ಕಣ್ಣಿಗೆ ಮಣ್ಣೆರೆಚಿ ಹೋದ ಕೆಆರ್‌ಡಿಸಿಯಲ್ ಗುತ್ತಿಗೆದಾರರ ಮೋಸದ ಜಾಲವನ್ನು ಅಧಿಕಾರಿಗಳಿಗೆ ಛೇದಿಸಲು ಸಾಧ್ಯವಾಗದಿರುವುದು ವಿಶೇಷ.
ಈಗಾಗಲೇ ಕಳೆದ ಗ್ರಾಮ ವಿಕಾಸ ಯೋಜನೆಯಲ್ಲಿ ಕೆಲವು ಗ್ರಾಮಗಳನ್ನು ಆಯ್ದುಕೊಂಡು ಸರಕಾರ ಪ್ರತಿ ಗ್ರಾಮಕ್ಕೆ 75 ಲಕ್ಷ ಅನುದಾನ ನೀಡಿದ್ದು ಇದನ್ನು ಕೂಡಾ ಕೆಆರ್‌ಡಿಸಿಎಲ್ ನವರು ಗುತ್ತಿಗೆ ವಹಿಸಿಕೊಂಡು ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಹೋದವರು ಇತ್ತ ಕಡೆ ತಲೆ ಹಾಕದೆ ಈಗ ಮತ್ತೆ ಕುಡಿಯುವ ನೀರಿನ ಯೋಜನೆಯಲ್ಲೂ ಅದೆಷ್ಟೋ ಲಕ್ಷ ಗಟ್ಟಲೆ ಹಣ ಲಪಟಾಯಿಸಿರುವುದಾಗಿ ಸಾರ್ವಜನಿಕರು ದೂರಿಕೊಂಡಿದ್ದಾರೆ.