ಕಡಬ ಟೈಮ್ಸ್, ಪ್ರಮುಖ ಸುದ್ದಿ:ಕಡಬ ತಾಲೂಕಿನ ಕೊಯಿಲದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸುಮಾರು 300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಲೆ ಎತ್ತಲಿರುವ ಸರ್ಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಸರ್ಕಾರದ ತೀರ್ಮಾನದ ಪ್ರಕಾರ 2020-21 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ತರಗತಿಗಳು ಆರಂಭಗೊಳ್ಳಬೇಕಿತ್ತು. ಆದರೆ ಮೊದಲ ಹಂತದ ಕಟ್ಟಡದ ಕಾಮಗಾರಿಯೇ ಶೇ. 75 ಮಾತ್ರ ಪೂರ್ಣಗೊಂಡಿದ್ದು ಇನ್ನಿತರ ಕಾಮಗಾರಿಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿದ್ದರು .2016ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. 2020-21ರ ವೇಳೆಗೆ ಮೊದಲ ಬ್ಯಾಚ್ ಆರಂಭಿಸುವ ಭರವಸೆಯನ್ನೂ ನೀಡಿದ್ದರು. ಕರ್ನಾಟಕ ರಾಜ್ಯ ಗೃಹ ಮಂಡಳಿ ಇದರ ಕೆಲಸವಹಿಸಿಕೊಂಡಿದ್ದು 110 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿ- ವಸತಿ ನಿಲಯ, ಅತಿಥಿ ಗೃಹ, ಕಾಲೇಜು ಕಟ್ಟಡ, ಆಸ್ಪತ್ರೆ ಕಟ್ಟಡಗಳು, ಕಚೇರಿ ಮತ್ತು ಸಿಬ್ಬಂದಿ ವಸತಿಗೃಹ ಕಟ್ಟಡಗಳ ನಿರ್ಮಾಣ ಪ್ರಗತಿ ಕಾಣದೆ ಕುಂಠಿತಗೊಂಡಿದೆ. ಅನುದಾನ ಬಿಡುಗಡೆಯಲ್ಲಿ ವ್ಯತ್ಯಯ ಮೊದಲಾದ ಕಾರಣಗಳು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಮೊದಲ ಹಂತದ ಕಾಮಗಾರಿಯ ಬಳಿಕ ಎರಡನೇ ಹಂತದ ಕಾಮಗಾರಿಗಳು ನಡೆಯಬೇಕಿದೆ. ಇದರಲ್ಲಿ ಒಳಚರಂಡಿ, ರಸ್ತೆ, ಸಿಬ್ಬಂದಿಗಳ ಕೊಠಡಿ, ಅಧಿಕಾರಿಗಳ ಬಂಗಲೆ, ಸಭಾಂಗಣ ಮೊದಲಾದ ಕಾಮಗಾರಿ ಎರಡನೇ ಹಂತದಲ್ಲಿ ಮಾಡಬೇಕಿದೆ. ಮೊದಲ ಹಂತದ ಕಾಮಗಾರಿಗೆ 110 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದ್ದು, ಈ ಪೈಕಿ ಈವರೆಗೆ 65 ಕೋಟಿ ರೂ ಮಾತ್ರ ಬಿಡುಗಡೆಯಾಗಿದೆ ಎನ್ನಲಾಗಿದೆ. ಇನ್ನುಳಿದ ಹಣ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿಯೂ ವೇಗ ಪಡೆಯುತ್ತದೆ. ಮೊದಲ ಹಂತದ ಕಾಮಾಗಾರಿ ಪೂರ್ತಿಯಾದ ಬಳಿಕ ಇಲಾಖಾ ಅನುಮತಿ ಪಡೆದು ಕಾಲೇಜು ಆರಂಭಿಸಬಹುದು ಎಂದು ಅಂದಾಜಿಸಲಾಗಿದೆ ಅತ್ಯಂತ ವೇಗವಾಗಿ ಸಾಗಿದ ಕಾಮಗಾರಿ ನಂತರದ ದಿನಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಬೇಸರ ತಂದಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ಕಾಲೇಜು ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.