ಕಡಬ ಟೈಮ್ಸ್ ,ಪಟ್ಟಣ ಸುದ್ದಿ: ಕಡಬ ತಾಲೂಕು ಕಛೇರಿ ಸಿಬ್ಬಂದಿಯೊಬ್ಬರ ಎಡವಟ್ಟಿನಿಂದಾಗಿ ಅರ್ಹ ಅಂಗವಿಕಲ ವೇತನ ಫಲಾನುಭವಿಯೋರ್ವರ ಮಾಸಿಕ ವೇತನ ಹಣ ಕಳೆದ 10 ತಿಂಗಳಿಂದ ಇನ್ಯಾರದೋ ಖಾತೆಗೆ ಜಮೆಯಾಗುತ್ತಿದೆ.
ಅಂಗವಿಕಲ ವೇತನಕ್ಕೆ ಅರ್ಜಿ ಸಲ್ಲಿಸಿ ಮಂಜೂರಾತಿಯಾಗಿದ್ದರೂ ವೇತನ ಪಡೆಯಲು ಅರ್ಜಿದಾರರು ನೀಡಿದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಛೇರಿ ಸಿಬ್ಬಂದಿ ತಪ್ಪಾಗಿ ನಮೂದಿಸಿರುವುದು ಈ ಎಡವಟ್ಟಿಗೆ ಕಾರಣ . ಈ ವಿಚಾರವನ್ನು ತಾಲೂಕು ಕಛೇರಿ ಸಿಬ್ಬಂದಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬವರ ಅಂಗವಿಕಲ ವೇತನ ಕಳೆದ ಹತ್ತು ತಿಂಗಳಿಂದ ಇನ್ನೊಬ್ಬರ ಖಾತೆಗೆ ಜಮೆಯಾಗುತ್ತಿದೆ. ಅರ್ಜಿಯ ಜೊತೆ ನೀಡಲಾದ ಅವರ ಬ್ಯಾಂಕ್ ಖಾತೆಯ ವಿವರವನ್ನು ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ 7ರ ಬದಲಾಗಿ 1 ಎಂದು ನಮೂದಿಸಿ ಸಿಬ್ಬಂದಿ ಪ್ರಮಾದ ಎಸಗಿದ್ದರಿಂದಾಗಿ ಅರ್ಹ ಫಲಾನುಭವಿಗೆ ಜಮೆಯಾಗಬೇಕಾದ ಮಾಸಿಕ ವೇತನ ರೂ.600 ಹಣ ಇನ್ನೊಬ್ಬರಿಗೆ ಜಮೆಯಾಗುತ್ತಿದ್ದುದು ಪತ್ತೆಯಾಗಿದೆ. ತನ್ನ ಖಾತೆಗೆ ಹಣ ಜಮೆಯಾಗದ ಬಗ್ಗೆ ಗ್ರಾಮಕರಣಿಕರ ಕಛೇರಿ ಮತ್ತು ಬ್ಯಾಂಕ್‌ಗೆ ಅಲೆದಾಟ ನಡೆಸಿದಾಗಲೂ ಅವರಿಗೆ ಸಮರ್ಪಕ ಉತ್ತರ ದೊರೆಯದೆ ಇದ್ದಾಗ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ಅವರ ಬ್ಯಾಂಕ್ ಖಾತೆ ನಂಬ್ರ ತನ್ನದಾಗಿರದ ಕಾರಣ ತನಗೆ ಬರಬೇಕಾಗಿದ್ದ ಮಾಸಿಕ ವೇತನ ಇನ್ಯಾರದೋ ಖಾತೆಗೆ ಜಮೆಯಾಗುತ್ತಿರುವುದು ಅವರಿಗೆ ಖಾತ್ರಿಯಾಗಿದೆ.
ಎರಡು ವರ್ಷಗಳ ಹಿಂದೆ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆ ನಡೆದು ಲಕ್ಷಾಂತರ ರೂಪಾಯಿ ಸಾಲದಲ್ಲಿದ್ದು ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದರೂ ದುಡಿಯುವ ಚೈತನ್ಯವನ್ನು ಕಳೆದುಕೊಂಡಿದ್ದಾರೆ. ಅಂಗವಿಕಲ ವೇತನ ಮಂಜೂರಾದರೂ ತನಗೆ ಸಿಗದೇ ಇರುವುದು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಎಡೆಮಾಡಿದೆ. ಘಟನೆ ಕುರಿತು ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಪುತ್ತೂರಿನ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಪ್ರತಿಕ್ರಿಯಿಸಿದ್ದಾರೆ.