ಕಡಬ ಟೈಮ್ಸ್, ಯೇನೆಕಲ್ಲು: ಗಂಡನ ಮನೆಗೆ ಹೋದಾಗ ಮಾವ ನನಗೆ ಮತ್ತು ನನ್ನ ಒಂದೂವರೆ ವರ್ಷ ಪ್ರಾಯದ ಮಗಳಿಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಕಡಬ ಸರಕಾರಿ ಆಸ್ಪತ್ರೆಯ ದಾಖಲಾಗಿ ಬಳಿಕ ಪೋಲೀಸ್ ದೂರು ನೀಡಿದ ಘಟನೆ ವರದಿಯಾಗಿದೆ.
ಯೇನೆಕಲ್ಲು ಗ್ರಾಮದ ಬನ ಎಂಬಲ್ಲಿ ವಾಸವಾಗಿರುವ ವಿಶ್ವನಾಥ ಗೌಡರು 5 ವರ್ಷಗಳ ಹಿಂದೆ ಕೈಕಂಬದ ಸುಮಿತ್ರ ಎಂಬವರನ್ನು ವಿವಾಹವಾಗಿದ್ದರು. ಹಲವು ಸಮಯಗಳಿಂದ ವಿಶ್ವನಾಥರ ತಂದೆ ದೊಡ್ಡಣ್ಣ ಗೌಡರಿಗೂ ಸೊಸೆ ಸುಮಿತ್ರರಿಗೂ ಜಗಳವಾಗುತ್ತಿತ್ತೆನ್ನಲಾಗಿದೆ . ಈ ಬಗ್ಗೆ ಈ ಹಿಂದೆಯೂ ಸುಮಿತ್ರ ಪೋಲಿಸ್ ದೂರು ನೀಡಿದ್ದರು.
ಆ.1 ರಂದು ತಾಯಿ ಮನೆಯಲ್ಲಿದ್ದ ಸುಮಿತ್ರರು ಗಂಡ ವಿಶ್ವನಾಥರ ಜತೆಗೆ ಯೇನೆಕಲ್ಲಿನ ಮ ನೆಗೆ ಬಂದು ಚಹಾ ಮಾಡಲು ಹೋದಾಗ ಮಾವ ದೊಡ್ಡಣ್ಣರು ” ನಾನು ತಂದಿರುವ ಕಟ್ಟಿಗೆಯನ್ನು ಮುಟ್ಟಬಾರದೆಂದು ” ಹೇಳಿ ಹೊಡೆದರೆಂದು ಹೇಳಲಾಗಿದೆ. ಈ ಸಂದರ್ಭ ಸುಮಿತ್ರರ ಹೆಣ್ಣು ಮಗುವಿಗೆ ತಾಗಿ ಗಾಯವಾಯಿತೆನ್ನಲಾಗಿದೆ.ಕೂಡಲೇ ಕಡಬ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಮಾವನ ಮೇಲೆ ಮತ್ತು ಯಮುನ, ಆದರ್ಶ, ರೇಗಪ್ಪರ ಮೇಲೆ ಸೊಸೆ ಸುಮಿತ್ರ ಪೋಲೀಸ್ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ದೊಡ್ಡಣ್ಣ ಗೌಡರಲ್ಲಿ ವಿಚಾರಿಸಿದಾಗ ನನ್ನ ಒಂದು ಕೈ ಆರೋಗ್ಯವಾಗಿಲ್ಲ, ಒಂದು ಕೈಯಿಂದ ಕಷ್ಟಪಟ್ಟು ಮಳೆಗಾಲಕ್ಕೆಂದು ಸೌದೆ ಮಾಡಿದ್ದೆ.ಅದನ್ನು ಮುಟ್ಟ ಬೇಡ ಎಂದು ಸೊಸೆಯಲ್ಲಿ ಹೇಳಿದಾಗ ಅವಳೇ ಬೈದು ಕಟ್ಟಿಗೆಯನ್ನು ನನ್ನ ಕಡೆಗೆ ಬಿಸಾಡುವಾಗ ಮಗುವಿಗೆ ತಾಗಿದೆ.ನಾನೇನು ಮಾಡಲಿಲ್ಲ,ಈ ಹಿಂದೆ ಸುಬ್ರಹ್ಮಣ್ಯ ಪೋಲಿಸರು ಮನೆಗೆ ಬಂದಾಗ ನನ್ನ ಆಸ್ತಿಯನ್ನು ಭಾಗಮಾಡಿ ಒಂದು ಭಾಗವನ್ನು ಅವರಿಗೆ ನೀಡುವುದಾಗಿ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.