ಕಡಬ ಟೈಮ್ಸ್, ಶಿರಾಡಿ: ಹಣ ದ್ವಿಗುಣಗೊಳಿಸುವ ಜಾಲವೊಂದು ಗ್ರಾಮೀಣ ಭಾಗವಾದ ಉದನೆಯಲ್ಲಿ ಸಕ್ರೀಯಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
1ಲಕ್ಷ ನೀಡಿದಲ್ಲಿ ಕೇವಲ 28 ದಿನಗಳಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ ಎಂಬ ಆಶ್ವಾಸನೆಯೊಂದಿಗೆ ಕಾರ್ಯಾಚರಿಸುತ್ತಿದ್ದು ಹೆಸರಿಗೆ ಬಿಲ್ಡಿಂಗ್ ಕ್ರಾಂಟ್ರಾಕ್ಟ್ ಕಂಪನಿ ಎಂದು ಹೇಳಿಕೊಳ್ಳುತ್ತಿರುವ ಈ ಕಂಪೆನಿಯ ವ್ಯವಹಾರಕ್ಕೆ ಜನ ಆಕರ್ಷಿತಗೊಂಡಿದ್ದಾರೆ.
ಕನ್‌ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಹೆಸರಿನಲ್ಲಿ ಈ ಕಂಪನಿಯು ಸ್ಥಳೀಯ ಶಿರಾಡಿ ಗ್ರಾಮ ಪಂಚಾಯತ್ ನಲ್ಲಿ ಟ್ರೇಡ್ ಲೈಸೆನ್ಸ್ ಪಡೆದುಕೊಂಡಿದೆ. ಆದರೆ ಕಂಪನಿಯು ಕಟ್ಟಡ ಕಾಮಗಾರಿಯನ್ನು ನಡೆಸುವ ಬದಲು ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಂಪನಿಯು ತನ್ನ ಪ್ರತಿನಿಧಿಗಳನ್ನು ಗ್ರಾಮದ ತುಂಬಾ ಫೀಲ್ಡ್ ವರ್ಕ್ ಗೆ ಬಿಟ್ಟಿದ್ದು, ಗ್ರಾಮಸ್ಥರಿಗೆ ಹಣ ದ್ವಿಗುಣ ಮಾಡಿಕೊಡುವ ಅಮಿಷ ನೀಡುತ್ತಿದೆ. ಗ್ರಾಮಸ್ಥರ ಪ್ರಕಾರ ಈ ಕಛೇರಿಯು ಕಳೆದ ನಾಲ್ಕು ತಿಂಗಳಿನಿಂದ ಉದನೆಯಲ್ಲಿ ಕಾರ್ಯಾಚರಿಸುತ್ತಿದೆ.
ಈಗಾಗಲೇ ಕೋಟಿಗೂ ಮಿಕ್ಕಿದ ಜನರ ಹಣವನ್ನು ಈ ಕಂಪನಿಯ ಪಡೆದುಕೊಂಡಿದ್ದು, ಕೆಲವರಿಗೆ ಹಣವನ್ನು ದ್ವಿಗುಣ ಮಾಡಿ ನೀಡಿದೆ. ಇದರಿಂದಾಗಿ ಗ್ರಾಮದ ಮಹಿಳೆಯರು ಶ್ರೀ ಶಕ್ತಿ ಹಾಗೂ ಸ್ವಸಹಾಯ ಗುಂಪುಗಳಿಂದ ಬಡ್ಡಿಗೆ ಹಣ ಪಡೆದು ಹಣ ದ್ವಿಗುಣಗೊಳ್ಳುವ ಆಸೆಯಿಂದ ಕಂಪನಿಯಲ್ಲಿ ಹಣ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಿಶೋರ್ ಶಿರಾಡಿ ಆರೋಪಿಸುತ್ತಾರೆ.