ಕಡಬ ಟೈಮ್ಸ್, ಸುಬ್ರಹ್ಮಣ್ಯ:ಎಲ್ಲೆಡೆ ಕೊರೋನಾ ಸೋಂಕಿತರ ಪ್ರಮಾಣ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು ಕುಕ್ಕೆ ದೇಗುಲಕ್ಕೆ ಪ್ರವಾಸಿಗರು ವಿವಿಧ ಪ್ರದೇಶದಿಂದ ಬರುವ ಕಾರಣ ಸುಬ್ರಹ್ಮಣ್ಯ ಜನತೆಗೆ ಕೊರೋನ ಹರಡುವ ಆತಂಕ ಹೆಚ್ಚಾಗಿದೆ. ಇದಕ್ಕಾಗಿ ಕುಕ್ಕೆ ದೇಗುಲಕ್ಕೆ ಭಕ್ತರ ಪ್ರವೇಶ ನಿಷೇಧಿಸುವಂತೆ ಶುಕ್ರವಾರ ದೇವಸ್ಥಾನದ ಆಡಳಿತಾಧಿಕಾರಿಗೆ ಮನವಿ ಮಾಡಲಾಗಿದೆ.
ಪ್ರಶಾಂತ್ ಮಾಣಿಲ ನೇತೃತ್ವದಲ್ಲಿ ಮನವಿಯನ್ನು ಕಾರ್ಯನಿರ್ವಹಣಾಧಿಕಾರಿ ಮೂಲಕ ಆಡಳಿತಾಧಿಕಾರಿಯವರಿಗೆ ನೀಡಲಾಗಿದೆ. ಕುಕ್ಕೆ ಗೆ ದಿನಂಪ್ರತಿ ಮೂರು ಸಾವಿರ ಜನಕ್ಕೂ ಮಿಕ್ಕಿ ಭಕ್ತರು ಆಗಮಿಸುತ್ತಿದ್ದು, ಅವರು ದೇವಸ್ಥಾನದ ಒಳ ಪ್ರವೇಶಿಸಿ ದೇವಸ್ಥಾನ ದೇವರ ದರ್ಶನ ಪಡೆದು ಹೊರಬರುತ್ತಿದ್ದಾರೆ. ಹೆಚ್ಚಿನವರು ಹೊರ ಜಿಲ್ಲೆ, ಹೊರ ರಾಜ್ಯದವರಾಗಿದ್ದು, ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಅನಿವಾರ್ಯವಾಗಿ ಮಾಸ್ಕ್ ಧರಿಸಿ, ಫೀವರ್ ಟೆಸ್ಟಿಗೆ ಒಳಪಡುತ್ತಾರೆ ಅಲ್ಲದೆ ಸ್ಯಾನಿಟೈಸರ್ ಬಳಸುತ್ತಾರೆ. ಆದರೆ ಕೆಲ ಭಕ್ತರು ಇದ್ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ವಹಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಇಲ್ಲಿ ದಿನಂಪ್ರತಿ ಸಾವಿರಕ್ಕೂ ಮಿಕ್ಕಿ ವಾಹನಗಳು ಹೊರ ಜಿಲ್ಲೆಯಿಂದ ಬಂದು ಹೋಗುತ್ತಿದ್ದು, ಖಾಸಗಿ ಹೋಟೆಲ್ ಗಳಲ್ಲಿ ಊಟ ಮಾಡುವುದು, ಬೀದಿಬದಿಯ ಅಂಗಡಿಗಳಲ್ಲಿ ವ್ಯಾಪಾರ ನಡೆಸುವುದು, ಆಹಾರ ಸೇವಿಸುವುದು ಕಂಡು ಬರುತ್ತಿದ್ದು ಇಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೆಧಿಸಬೇಕು ಎಂಬ ಕೂಗು ಕೇಳಲಾರಂಭಿಸಿದೆ.