ಕಡಬ ಟೈಮ್ಸ್,ಕೋಡಿಂಬಾಳ: ಬಯಲು ಶೌಚ ಮುಕ್ತ ಜಿಲ್ಲೆ’ ಎಂದು ಈಗಾಗಲೇ ಘೋಷಿಸಲ್ಪಟ್ಟಿರುವ ದ.ಕ. ಜಿಲ್ಲೆಯ ಹಲವು ಮನೆಗಳಲ್ಲಿ ಶೌಚಾಲಯಗಳಿಲ್ಲ. ಇದಕ್ಕೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪದಲ್ಲಿರುವ ಈ ಬಡ ಕುಟುಂಬವೇ ಸಾಕ್ಷಿಯಾಗಿದೆ.
ಅನಾರೋಗ್ಯ ಪೀಡಿತರಾಗುವ ಮೋನಪ್ಪ ಕುಂಬಾರ ಅವರ ಕುಟುಂಬ ಹಲವು ವರ್ಷಗಳಿಂದ ಬಯಲು ಶೌಚದ ಮೊರೆ ಹೋಗುತ್ತಿದ್ದಾರೆ. ಇನ್ನು ಶಾಲೆಗೆ ಹೋಗುವ ಮಗಳು ಮತ್ತು ಮಗ ನಿತ್ಯವೂ ಮುಜುಗರ ಪಡುವಂತಾಗಿದೆ. ವಿಪರ್ಯಾಸವೆಂದರೆ ಪಕ್ಕದಲ್ಲಿಯೇ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯರ ಮನೆಯಿದ್ದು,ಎರಡು ಅವಧಿಯಲ್ಲಿ ಗೆದ್ದು ತನ್ನ ಹತ್ತು ವರ್ಷದ ಅವಧಿಯಲ್ಲಿ ಕನಿಷ್ಠ ಶೌಚಾಯ ನಿರ್ಮಾಣಕ್ಕೆ ಒತ್ತು ನೀಡಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕಲ್ಲಿ ಮೂಡಿದೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಗ್ರಾ.ಪಂ ಕೂಡ ನಿರ್ಲಕ್ಷವಹಿಸಿದೆ ಎನ್ನುವುದಕ್ಕೆ ಇದೊಂದು ತಜಾ ಉದಾಹರಣೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ಅನುಷ್ಠಾನಗೊಳಿಸುವ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಕುಟುಂಬದವರು ವೈಯಕ್ತಿಕ ಶೌಚಾಲಯ ಹೊಂದುವುದು ಯೋಜನೆಯ ಉದ್ದೇಶ .ಆದರೆ ಇದು ಅನುಷ್ಠಾನ ವಾಗದಿರುವುದು ಪ್ರಶ್ನಾತೀತವಾಗಿದೆ.
ಅಡಿಕೆ ಸುಲಿದು ಕುಟುಂಬಕ್ಕೆ ಆಸರೆಯಾಗುವ ಶಾಲಾ ಬಾಲಕ:ತಂದೆಯ ಅನಾರೋಗ್ಯದ ಕಾರಣ ಕುಟುಂಬದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ತಾಯಿ ಬೀಡಿ ಕಟ್ಟಿ ಕುಟುಂಬ ನಿರ್ವಹಿಸಲು ಕಷ್ಟ ಪಡುತ್ತಿದ್ದಾರೆ.ಹೀಗಾಗಿ ವರುಣ್ ರಜಾ ದಿನಗಳಲ್ಲಿ ಅಡಿಕೆ ಸುಲಿಯಲು ಹೋಗಿ ಸಂಪಾದಿಸಿದ ಹಣದಿಂದ ಜೀವನ ನಿರ್ವಹಣೆಯಾಗುತ್ತಿದೆ. ಬಡತನದಲ್ಲಿ ದಿನದೂಡುತ್ತಿರುವ ವರುಣ್ ಮನೆಯಲ್ಲಿ ಆನ್ಲೈನ್ ತರಗತಿಗೆ ಬೇಕಾದ ಒಂದು ಟಿವಿಯಾಗಲೀ, ಸ್ಮಾರ್ಟ್ ಫೋನ್ ಆಗಲೀ ಇಲ್ಲ. ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯೂ ಇಲ್ಲ. ಎಲ್ಲಾ ಮಕ್ಕಳು ಟಿವಿ, ಮೊಬೈಲ್ ಮೂಲಕ ಶಿಕ್ಷಣ ಪಡೆಯುತ್ತಿರಬೇಕಾದರೆ ಈ ಮಕ್ಕಳು ಮತ್ತು ಇವರ ಪೋಷಕರು ತಮ್ಮ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಾರೆ.
“ಶೌಚಾಲಯ ನಿರ್ಮಿಸಲು ಗ್ರಾ.ಪಂ ಅಸ್ತಿತ್ವದಲ್ಲಿರುವ ಸಮಯದಲ್ಲಿ ಅನುದಾನ ಬಿಡುಗಡೆ ಗೊಂಡಿದೆ. ಬಡ ಕುಟುಂಬದ ಮನೆಯ ಪಕ್ಕ ಸ್ಥಳದ ಅಭಾವದಿಂದ ಮತ್ತು ಮನೆಯವರ ಸೂಕ್ತ ಸ್ಪಂದನೆ ಇಲ್ಲದ ಕಾರಣ ಶೌಚಾಲಯದ ಕೆಲಸ ಆಗಲಿಲ್ಲ, ನಾನು ವೈಯಕ್ತಿಕವಾಗಿ ಮತ್ತು ಸ್ಥಳೀಯರು ಈ ಬಡಕುಟುಂಬಕ್ಕೆ ಆರ್ಥಿಕವಾಗಿಯೂ ನೆರವಾಗಿದ್ದೇವೆ.-ಮಾಧವ ಕೊಪ್ಪ ಮಾಜಿ ಗ್ರಾ.ಪಂ ಸದಸ್ಯರು
“ನನ್ನ ತಂದೆ ಅನಾರೋಗ್ಯವಾಗಿದ್ದು ಅವರು ಶೌಚಕ್ಕೆ ಹೋಗಲು ಕಷ್ಟ ಪಡುತ್ತಿದ್ದಾರೆ.ಹರೆಯಕ್ಕೆ ಬಂದ ತಂಗಿಯೂ ಇದ್ದಾಳೆ ನಮಗೆ ಶೌಚಾಲಯ ಅಗತ್ಯವಾಗಿದೆ. ಪೋನ್ ಇಲ್ಲದ ಕಾರಣ ಆನ್ ಲೈನ್ ಪಾಠ ಆಲಿಸಲು ಸಾಧ್ಯವಾಗುತ್ತಿಲ್ಲ” -ವರುಣ್ ವಿದ್ಯಾರ್ಥಿ