ಕಡಬ ಟೈಮ್ಸ್,ಕೋಡಿಂಬಾಳ:ಹಣಕಾಸು ಹಾಗೂಭೂ ವಿವಾದಕ್ಕೆ ಸಂಬಂಧಿಸಿ ಮಹಿಳೆಯೋರ್ವರ ಮುಖಕ್ಕೆ ಆಕೆಯ ಬಾವನೇ ಆಸಿಡ್ ಎರಚಿದ ಘಟನೆ ಕೋಡಿಂಬಾಳದಲ್ಲಿ ಜನವರಿ 23 ಗುರುವಾರದಂದುಸಂಜೆ ನಡೆದಿದ್ದು,ಆಸಿಡ್ ಎರಚಿದ ವ್ಯಕ್ತಿಯನ್ನು ಕಡಬಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಂಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಎಲ್‌ಐಸಿ ಏಜೆಂಟ್ ಜಯಾನಂದ ಕೊಠಾರಿ (55ವ.)ಎಂಬವರು ಆಸಿಡ್ ಎರಚಿದ ವ್ಯಕ್ತಿ. ತನ್ನ ತಮ್ಮನ ಪತ್ನಿ ವಿಧವೆ ಮಹಿಳೆ ಸ್ವಪ್ನಾ(35ವ.) ಎಂಬವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ ಎಸೆದಿದ್ದು, ಪಕ್ಕದಲ್ಲಿದ್ದ ಆಕೆಯ ಹೆಣ್ಣು ಮಗಳಿಗೂ ಆಸಿಡ್ ತಾಗಿದೆ. ತಾಯಿ ಮತ್ತು ಮಗುವನ್ನು ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಪ್ನಾ ಅವರ ಪತಿ ರವಿ ಅವರು ಮೃತಪಟ್ಟಿದ್ದು, ಸ್ವಪ್ನಾರವರು ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರುಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿದ್ದು, ಅದು ಭೂ ವಿವಾದಕ್ಕೆ ತಿರುಗಿ ಇವರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದುತಿಳಿದು ಬಂದಿದೆ. ಈ ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದರೂ ಸುಖಾಂತ್ಯಗೊಂಡಿರಲಿಲ್ಲ. ಗುರುವಾರದಂದು ಸಂಜೆ ಇವರ ನಡುವೆ ಜಗಳ ನಡೆದಿದ್ದು ಈ ವೇಳೆ ಆಸಿಡ್ ಎರಚಲಾಗಿದೆ ಎಂದು ವರದಿಯಾಗಿದೆ. ಕಡಬ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ .